ಗಾಗರ್ಯ 1
ಒಬ್ಬ ಪ್ರಸಿದ್ಧ ಪ್ರಾಚೀನ ವೈಯಾಕರಣಿ. ಈತ ನಿರುಕ್ತವನ್ನು ಕುರಿತ ಗ್ರಂಥವನ್ನು ರಚಿಸಿದ್ದಿರಬಹುದೆಂದು ಹೇಳಲಾಗಿದೆ. ವೇದಾಂಗ - ಶಿಕ್ಷಾ ಭಾಗಗಳಾಗಿರುವ ಪ್ರಾತಿಶಾಖ್ಯಗಳಲ್ಲಿ ಈತನ ಹೆಸರು ಕಂಡುಬರುತ್ತದೆ. ಸುಪ್ರಸಿದ್ಧ ನಿರುಕ್ತರಾದ ಯಾಸ್ಕ (ಪ್ರ.ಶ.ಪು. ಸು. 600) ತನ್ನ ನಿರುಕ್ತದಲ್ಲಿ ಸೂಚಿಸಿರುವ ಮತ್ತು ಅವನಿಗಿಂತಲೂ ಮೊದಲಿನವರಾಗಿದ್ದ ವ್ಯಾಕರಣಾಚಾರ್ಯರಲ್ಲಿ ಗಾಗರ್ಯನೂ ಒಬ್ಬನಾಗಿದ್ದಾನೆ. ಈತನ ಹೆಸರು ಕಂಡುಬರುವ ಮತ್ತೊಂದು ಮುಖ್ಯ ಗ್ರಂಥವೆಂದರೆ ಪಾಣಿನಿಯ ಅಷ್ಟಾಧ್ಯಾಯೀ (ಪ್ರ.ಶ.ಪು. ಸು. 400). ಈ ಗ್ರಂಥಗಳು ಸಾಮಾನ್ಯವಾಗಿ ವೈದಿಕಸ್ವರಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಈತನ ಹೆಸರನ್ನು ಸೂಚಿಸುತ್ತವೆ.
ನಾಮಪದಗಳೆಲ್ಲವೂ ಆಖ್ಯಾತಗಳಿಂದ (ಕ್ರಿಯಾಸೂಚಕ ಧಾತುಗಳು) ನಿಷ್ಪನ್ನವಾಗುತ್ತವೆಂದೂ ಅದು ಆಚಾರ್ಯ ಶಾಕಟಾಯನನ ಹಾಗೂ ನೈರುಕ್ತ ಸಿದ್ಧಾಂತವೆಂದೂ ಯಾಸ್ಕ ಪ್ರತಿಪಾದಿಸಿದ್ದಾನೆ. ಯಾಸ್ಕನೇ ಹೇಳಿರುವ ಪ್ರಕಾರ, ಕೆಲವು ವೈಯಾಕರಣರಂತೆ ಗಾಗರ್ಯನೂ ಎಲ್ಲ ನಾಮಪದಗಳೂ ಧಾತು ನಿಷ್ಪನ್ನವಾಗಲಾರವೆಂಬ ಅಭಿಪ್ರಾಯವುಳ್ಳವನಾಗಿದ್ದಾನೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ